ಚಿಕ್ಕ ಚಿಕ್ಕ ಸಂಗತಿಗಳು

ಅಂದು ಆ ಹುಡುಗ ಬೇಗ ಕ್ರಿಕೆಟ್ ಆಡಿ, ಮನೆಗೆ ಬಂದು, ಮುಖ ತೊಳೆದು, ಅಮ್ಮನ ಸೆರಗಿನಲ್ಲೇ ಮುಖವನ್ನು ಒರೆಸಿ, ದೇವರ ಮನೆಗೆ ಹೋದ. ಅಮ್ಮ ತೊಟ್ಟಿಯ ಬಳಿಯಲ್ಲೇ ನಿಂತು ಒಮ್ಮೆ ಆಶ್ಚರ್ಯಗೊಂಡರು. ‘ಏನು ದೇವರು ಇವನಿಗೆ ಇಷ್ಟು ಒಳ್ಳೆ ಬುದ್ಧಿ ಕೊಟ್ಟನಾ?!’ ಎಂದು, ನಗುತ್ತಲೇ ಅಡುಗೆ ಮನೆಗೆ ಹೋದರು. ಇವನು ದೇವರ ಮುಂದೆ ನಿಂತವನೇ, ದೇವರ ಮುಂದೆ ಇಟ್ಟಿದ್ದ ಕಾಸಿರುವ ಬಟ್ಟಲನ್ನು ಒಮ್ಮೆ ದೇವರನ್ನು ನೋಡುತ್ತಾ, ಒಮ್ಮೆ ದುಡ್ಡನ್ನು ನೋಡುತ್ತಾ ನಿಂತ.
ಇವನ ಪ್ರಕಾರ ದೇವರು ಇವನ ಆಪ್ತ ಸ್ನೇಹಿತ. ಆದ್ದರಿಂದ, ‘ದೇವರೇ, ಇದೊಂದು ಸಲ ನನ್ನನ್ನು ಕ್ಷಮಿಸು’ ಎಂದು, ೨ ರೂಪಾಯಿಯನ್ನು ಆ ಬಟ್ಟಲಿನಿಂದ ತೆಗೆದುಕೊಂಡು, ಸದ್ದು ಮಾಡದೇ ಮನೆಯಿಂದ ಹೊರಟ. ಮಕ್ಕಳು ಮಾಡುವ ಅಪರಾಧಗಳಲ್ಲೂ ಬರಿ ಮುಗ್ಧತೆಯೇ ತುಂಬಿದೆ ಅಲ್ಲವೇ? ಈ ಹುಡುಗ ದೊಡ್ಡವನಾಗಿ ಮಾಡಿದ ಹಾವಳಿಗಳೆಲ್ಲಾ ತುಂಟಾಟದ ಪರಮಾವಧಿ. ಸದ್ಯಕ್ಕೆ ಆ ವಿಷಯ ಬೇಡ ಇಲ್ಲಿ.

ಯಾರ ಕಣ್ಣಿಗೂ ಬೀಳದ ಹಾಗೆ, ಅಂಗಡಿಗೆ ಹೋಗಿ, ವಿಷ್ಣುವರ್ಧನ್ ಫೋಟೋ ಇರುವ ಒಂದು ಗ್ರೀಟಿಂಗ್ ಕಾರ್ಡ್ ತಂದು, homework ಮಾಡುವ ಹಾಗೆ ನಟನೆ ಮಾಡುತ್ತ ಕುಳಿತ. ನೋಡಿದರೆ ಏನೋ ನೋಟ್ಸ್ ಬರೆಯುವ ಹಾಗೆ ಭಾಸವಾಗಬೇಕು, ಆದರೆ ಒಳಗಡೆ ಅವಳಿಗೆ ಶುಭಾಶಯ ಪತ್ರ ಬರೆಯುತ್ತಿದ್ದ. ಮರುದಿನ ಅವಳ ಹುಟ್ಟಿದ ಹಬ್ಬ. ತಿರುಬೋಕಿಯನ್ನು ವಾಲ್ಮೀಕಿಯಾಗಿ ಮಾಡುವ ಶಕ್ತಿ ಹೆಣ್ಣಿನ ಪ್ರೀತಿಗಿದೆ. ಹಾಗಂತ ಇವನು ಪ್ರಾಸಬದ್ಧ, ಅರ್ಥವುಳ್ಳ, ಸುಂದರ ಕವಿತೆ ಬರೆದನೇ ? ಇಲ್ಲ. ಮೊದಲು ಅರ್ಧ ಚಂದ್ರಾಕಾರ ರೀತಿಯಲ್ಲಿ “HAPPY BIRTHADAY TEJA ” ಎಂದು ಬರೆದ. ಮತ್ತೆ, ಸ್ವಲ್ಪ ಯೋಚಿಸಿ

“ನಾನೊಂದು ಮಾನ,

ನೀನೊಂದು ಮಾನ,

ಇಬ್ಬರು ಸೇರಿದರೆ ಯಜಮಾನ”

ಎಂದು ಬರೆದ. ಇದರಲ್ಲಿ ಪ್ರಾಸ ಕಾಣದಿದ್ದಲ್ಲಿ ನೀವು ಕಾವ್ಯಾತ್ಮಕವಾಗಿ ಅಂಧರು.

ನೋಡು ನೋಡುತ್ತಲೇ ಕತ್ತಲೆ ಆಯಿತು. ಕರೆಂಟ್ ಕೂಡ ಹೋಯಿತು. ಅಮ್ಮ ಸೀಮೆಎಣ್ಣೆ ದೀಪ ಹಚ್ಚಿದರು. ಅದರ ಬೆಳಕಿನ ಸುತ್ತ – ಅಪ್ಪಾಜಿ, ಇವನು, ಅಮ್ಮ, ಮೂವರು ಕುಳಿತರು. ಆ ದೀಪ ಅಲುಗಾಡುವ ಹಾಗೆ ತಲೆ ಆಡಿಸಿ, ಅದರ ಮೆಲು ಜ್ವಾಲೆಯ ಹತ್ತಿರ ತನ್ನ ಅಂಗೈಯನ್ನು ತಂದು, ಇನ್ನೇನು ಸುಡುವ ಅಷ್ಟರಲ್ಲಿ ಹಿಂದೆ ತೆಗೆದ. ಹೀಗೆ ದೀಪದ ಜೊತೆ ಆಟ ಆಡುವುದು ಹೇಗೋ ಕಾಲ ಹರಣದ ಜೊತೆಗೆ ಇವನಿಗೆ ಬಾಲಿಶ ತೃಪ್ತಿ ನೀಡುತಿತ್ತು. ಅವಳ ಹೆಸರ ಮೊದಲಕ್ಷರ ಬರೆದುಕೊಂಡ ಅಂಗೈಗೆ ಮಸಿಯಾಗಿ, ಬರೆದದ್ದು ಮಾಸಿಹೋಗಿತ್ತು. ಕೈಯನ್ನು ತಲೆಗೆ ಸವರಿಕೊಂಡ. ಕತ್ತಲಲ್ಲಿ ಕೈಗೆ ಸಿಕ್ಕ ಕಸ, ಪೇಪರ್ ಚೂರು, ಕೀಟ ಎಲ್ಲವನ್ನು ದೀಪದ ಬೆಂಕಿಗೆ ಒಡ್ಡಿ ಅದನ್ನು ಹತ್ತಿ ಉರಿಸಿದರೆ ಇವನಿಗೆ ಏನೋ ಖುಷಿ. ಇವನ ಆಟಕ್ಕೆ ಮಿತಿಯುಂಟೆ ?

ಇವನ ಚೇಷ್ಟೆಗಳೆಲ್ಲಾ ಬರಿ ಅಮ್ಮನ ಮುಂದೆ ಅಷ್ಟೇ. ಅಪ್ಪಾಜಿ ಎದುರು ಅಷ್ಟೇ ಸಾಧು. ಆದರೆ ಅಪ್ಪಾಜಿ ಇವನ ಎದುರು ತಾವೂ ಮಗುವಾಗುತ್ತಿದ್ದರು. ದಿನವೂ ಹೀಗೆ ಸುಮ್ಮನೆ “ಏನಪ್ಪಾ ಪಟೇಲ ?! ಏನ್ ನಡೀತು ಶಾಲೆಲಿ?. ಏನ್ ಹೇಳ್ ಕೊಟ್ರು ಮೇಡಮ್ಮು ? ತೇಜ ಶಾಲೆಗೆ ಬಂದಿದ್ಲ್ಯಾ ?” ಎಂದು ಕೇಳುತ್ತಿದ್ದರು. ಇವನು ತೇಜ ಶಬ್ದ ಕೇಳುತ್ತಿದ್ದ ಹಾಗೆ, ತುಟಿಯನ್ನು ಮೂರಡಿ ಮಾಡಿಕೊಂಡು ಮಿಕ್ಕಿದ ಪ್ರಶ್ನೆಗಳನ್ನೆಲ್ಲ ಮರೆತು “ಹ್ಞೂ, ಬಂದಿದ್ಲು, ಸ್ಕೂಲ್ ಅನುಯಲ್ ಡೇ ಪ್ರೋಗ್ರಾಮ್ ಗೆ ನನ್ನ ಅವಳನ್ನು ಜೋಡಿ ಮಾಡಿದ್ರು ರೇಣುಕಾ ಮಿಸ್” ಎಂದ. ಅಪ್ಪಾಜಿ ನಗುತ್ತಲೇ “ಒಹೋ, ಅವರಪ್ಪ ನನಗೆ ಹಾಲಿನ ಡೈರಿಯಲ್ಲಿ ಸಿಕ್ಕಿದ್ದ, ಮಾತಾಡಿ ನಿಂಗೆ ಅವಳ ಜೊತೆ ಮದುವೆ ಮಾಡ್ಸೋನ್ವಾ ?” ಎಂದರು. “ಸುಮ್ನೆ ಇರಿ ಅಪ್ಪಾಜಿ” ಎಂದು ನಾಚಿಕೊಂಡ.

ಮರುದಿನ, ಬೇಗನೆ ರೆಡಿ ಆಗಿ ಬೋರ್ಡ್ ಮೇಲೆ ಬಣ್ಣ ಬಣ್ಣದ ಬಳಪಗಳಿಂದ ಅವಳಿಗೆ ಸಂದೇಶ ಬರೆದು, ಶುಭ ಕೋರಿ, ಅವಳನ್ನು ನೋಡಲು ತುದಿಗಾಲಲ್ಲಿ ನಿಂತಿದ್ದ. ಬಂದ ಶಾಲಾ ವಾಹನದ ಹಾರ್ನ್ ಸದ್ದು ಕೂಡ ವಯೊಲಿನ್ ನುಡಿಸಿದಂತೆ ಕೇಳಿತ್ತು. ಎಲ್ಲರೂ ಇಳಿದು ಬರುತ್ತಿದ್ದರು, ಇವಳ ಸುಳಿವೇ ಇರಲಿಲ್ಲ. ಇವನ ಕಣ್ಣು ಬರಿ ಅವಳನ್ನೇ ಹುಡುಕುತಿತ್ತು. ಗಮನಿಸದೆ ಇದ್ದಾಗ ತೇಲಿ ಬರುವ ಘಮಲಿನಂತೆ, ಆಗಲೇ ಸೇರಿದ್ದ ಮಕ್ಕಳ ಗುಂಪಿನ ಮಧ್ಯದಿಂದ, ಇವನ ನೋಡಿ ನಸು ನಕ್ಕು, ನಡೆದುಕೊಂಡು ಬರುತ್ತಿದ್ದಳು, ಕೆಂಪು ಫ್ರಾಕಿನಲ್ಲಿ.

ಇವನು ಅವಳು ಹತ್ತಿರ ಬಂದಾಗ ಭಾವಿಸಿದ್ದು ಎಷ್ಟೋ, ಆದರೆ ಅವುಗಳನ್ನು ಪದಗಳಾಗಿ ಅನುವಾದ ಮಾಡುವುದರಲ್ಲಿ ವಿಫಲನಾಗಿದ್ದನು. ಗಂಟಲಲ್ಲೇ ಒಂದೆರಡು ಪದ ಸಿಲುಕಿಕೊಂಡಂತೆ ಅವಸರದಲ್ಲಿ “Happy New Year Teja ” ಎಂದ. “ನನ್ನ ಹುಟ್ಟು ಹಬ್ಬ ಕಣೋ , ಕೋತಿ” ಎಂದು ಅವನ ತಲೆ ಮೊಟಕಿದಳು. ಅವಳಿಗೇನು ಗೊತ್ತು ಅವನು ನಿನ್ನೆಯೆಲ್ಲ ಕನಸಿನಲ್ಲಿ ಪ್ರಯಾಣ ಮಾಡಿ ಬಂದದ್ದು?. ಬೋರ್ಡ್ ಮೇಲೆ ಮಾಡಿದ್ದ ಅಲಂಕಾರ, ಅವನು ಕೊಟ್ಟ ಗ್ರೀಟಿಂಗ್, ಅವನು ವಿಶ್ ಮಾಡಿದ ಪರಿ ನೋಡಿ, “ತುಂಬಾ ಥ್ಯಾಂಕ್ಸ್ ಕಣೋ” ಅಂದಳು. ಅಷ್ಟೇ ಸಾಕಿತ್ತು ಅವನಿಗೆ. ತಲೆ ಬಗ್ಗಿಸಿಯೇ ತುಸು ನಾಚಿದ.

ಕ್ಲಾಸ್ ಶುರುಆಗಿ ಎಲ್ಲರು ಪಾಠವನ್ನು ಕೇಳುತ್ತಿದ್ದರೆ ಇವನ ಕಣ್ಣು ಇನ್ನೆಲ್ಲೋ ಇತ್ತು. ಎಲ್ಲರು ಯುನಿಫಾರ್ಮ್ ಧರಿಸಿ ಬಂದಿದ್ದರೆ ಇವಳು ಕಣ್ಣು ಸೆಳೆಯುವ ಸುಂದರ ಉಡುಗೆಯಲ್ಲಿ ಬಂದಿದ್ದಳು. ರೇಣುಕಾ ಮಿಸ್ ಅವಳನ್ನು ಮುಂದೆ ಕರೆದು, ಎಲ್ಲರು ನಿಂತು “ನಗುತ ನಗುತ, ಬಾಳು ನೀನು” ಹಾಡು ಹಾಡಬೇಕೆಂದು ಹೇಳಿದರು. ಇವನು ಸ್ವಲ್ಪ ಹೆಚ್ಚು ಜೋರು ಧ್ವನಿಯಲ್ಲೇ ಹಾಡಿದ ಅವಳಿಗೆ ಸ್ಪಷ್ಟ ಸೂಚನೆ ತಲುಪುವ ಹಾಗೆ. ಹೀಗೆ ಎತ್ತರದ ಸ್ವರದಲ್ಲಿ ಹಾಡಿದಾಗ ಅವಳು ಇವನನ್ನು ನೋಡಿದಳು ಸಹ. ಒಂದೊಂದೇ ಚಾಕಲೇಟ್ ಅನ್ನು ಎಲ್ಲರಿಗು ಕೊಡುತ್ತ ಬಂದಳು. ಇವನಿಗೆ ಕೊಡಲು ಬಂದಾಗ ಇವನು ಸೀಧಾ ಅವಳ ಕೈ ಹಿಡಿದುಕೊಂಡು ಕದಲಲು ಬಿಡಲಿಲ್ಲ. ಇವಳಿಗೆ ಗಾಬರಿ ಹಾಗು ನಾಚಿಕೆ. ಹೇಗೋ ಕೈ ಬಿಡಿಸಿಕೊಂಡು ಮುಂದೆ ಹೋದಳು.

ಇವನು ತನ್ನ ಕೈ ತೆಗೆದು ನೋಡಿದ. ಎಲ್ಲರಿಗು ಒಂದು ಚಾಕಲೇಟ್ ಕೊಟ್ಟು, ಇವನಿಗೆ ಮಾತ್ರ ಎರಡು ಚಾಕಲೇಟ್ ಕೊಟ್ಟು ಹೋಗಿದ್ದಳು.